ಕ್ವೀನ್ಸ್‍ಲೆಂಡ್	

ಆಸ್ಟ್ರೇಲಿಯದ ಈಶಾನ್ಯ ಭಾಗದಲ್ಲಿರುವ ಒಂದು ರಾಜ್ಯ. 6,67,000 ಚ.ಮೈ. ವಿಸ್ತೀರ್ಣದಲ್ಲಿ 1/5 ಭಾಗದಷ್ಟಿದೆ. ಇದಕ್ಕೆ 3,236 ಮೈಲಿಗಳ ಉದ್ದದ ಸಮುದ್ರ ಕಿನಾರೆಯಿದೆ. ನೈಋತ್ಯದಲ್ಲಿ ದಕ್ಷಿಣ ಆಸ್ಟ್ರೇಲಿಯ, ಪಶ್ಚಿಮದಲ್ಲಿ ನಾರ್ದರ್ನ್ ಟೆರಿಟೊರಿ, ಉತ್ತರದಲ್ಲಿ ಕಾರ್ಪೆಂಟೇರಿಯ ಖಾರಿ, ಈಶಾನ್ಯ ಮತ್ತು ಪೂರ್ವಗಳಲ್ಲಿ ಕಾರಲ್ ಸಮುದ್ರ ಮತ್ತು ಪೆಸಿಫಿಕ್ ಸಾಗರ, ದಕ್ಷಿಣದಲ್ಲಿ ನ್ಯೂ ಸೌತ್ ವೇಲ್ಸ್-ಇವು ಇದರ ಮೇರೆಗಳು. ಉತ್ತರ-ದಕ್ಷಿಣವಾಗಿ ಗರಿಷ್ಠ ಉದ್ದ 1,238 ಮೈ. ಪೂರ್ವಪಶ್ಚಿಮವಾಗಿ ಗರಿಷ್ಠ ಅಗಲ 945 ಮೈ. ಬ್ರಿಸ್ಟೇನ್ ಇದರ ರಾಜಧಾನಿ. ಕ್ವೀನ್ಸ್‍ಲೆಂಡಿನ ಜನಸಂಖ್ಯೆ 17,25,709 (1968).

ಭೌತಲಕ್ಷಣ: ಈ ರಾಜ್ಯದ ಹೆಚ್ಚು ಭಾಗ ಮೈದಾನ. ಪರ್ವತ ಪ್ರದೇಶಗಳು ಕಡಿಮೆ. ಪೂರ್ವ ಮತ್ತು ಭಾಗಗಳು ಹೆಚ್ಚು ಎತ್ತರ. ದಕ್ಷಿಣದ ನ್ಯೂ ಸೌತ್ ವೇಲ್ಸ್ ಎಲ್ಲೆಯಿಂದ ಉತ್ತರದ ಯಾರ್ಕ್ ಭೂಶಿರದ ವರೆಗೆ ಉದ್ದಕ್ಕೂ ಈಸ್ಟರ್ನ್ ಹೈಲ್ಯಾಂಡ್ಸ್ ಹಬ್ಬಿದೆ. ಇದರ ಅಂಚಿನಲ್ಲಿ ಅಸಂಖ್ಯಾತ ಮುರುಕಲು ಗುಡ್ಡಗಳುಂಟು. ಹುಲ್ಲುಗಾವಲಿನಿಂದ ಕೂಡಿ ಅಗಲವಾದ ಪಟ್ಟೆಯಂತಿರುವ ಈ ಪ್ರಸ್ಥಭೂಮಿ 1,000' ಗಿಂತ ಎತ್ತರವಾಗಿದೆ. ಬ್ರಿಸ್ಟೇನ್‍ಗೆ ಬೆಂಗಡೆಯಲ್ಲಿ 3,000' ಔನ್ನತ್ಯ ತಳೆದಿರುವ ಪ್ರದೇಶಗಳುಂಟು. ಕ್ವೀನ್ಸ್‍ಲೆಂಡ್ ರಾಜ್ಯದ ಅತ್ಯುನ್ನತ ಶಿಖರ ಇರುವುದು ಉತ್ತರದಲ್ಲಿ. ಬೆಲೆಂಡೆಂಕರ್ ಶ್ರೇಣಿಯ ಬಾಟ್ರ್ಲ್ ಫ್ರಿಯರ್ ಶಿಖರದ ಎತ್ತರ 5,438'. ಈ ಶ್ರೇಣಿಯ ನಡುವೆ ಇರುವ ಆಥರ್ಟನ್ ಪ್ರಸ್ಥಭೂಮಿ ಫಲವತ್ತಾದ ನೆಲ. ತ್ರಿಕೋಣಾಕಾರವಾಗಿರುವ ಈ ಪ್ರಸ್ಥಭೂಮಿಯ ಎತ್ತರ 2,000'. ಇದೇ ಎತ್ತರವಿರುವ ಇನ್ನು ಮೂರು ಪ್ರಸ್ಥಭೂಮಿಗಳಿವೆ. ಅವು ಸಣ್ಣವು. ಅವುಗಳಲ್ಲೊಂದು ಮಕೈ ಪಟ್ಟಣದ ಹಿಂಬದಿಯಲ್ಲಿದೆ. ಮತ್ತೊಂದು ಪ್ರಸ್ಥಭೂಮಿ ಇರುವುದು ದಕ್ಷಿಣದ ಒಳನಾಡಿನಲ್ಲಿ. ಡಾರ್ಲಿಂಗ್ ಡೌನ್ಸ್ ಮೂರನೆಯದು. ಒಳನಾಡಿನ ವಿಶಾಲ ಪಶ್ಚಿಮ ಬಯಲು ಸಾಮಾನ್ಯವಾಗಿ 500' ಎತ್ತರವಾಗಿದೆ. ಅತ್ಯಂತ ದಕ್ಷಿಣದಲ್ಲಿ ಮ್ಯಾಕ್‍ಫರ್ಸನ್ ಪರ್ವತಶ್ರೇಣಿ ಮುಖ್ಯವಾದ್ದು.
ಕ್ವೀನ್ಸ್‍ಲೆಂಡಿನಲ್ಲಿ ಹಲವು ನದಿಗಳುಂಟು. ಆದರೆ ಅವು ನೌಕಾಯಾನಕ್ಕೆ ಉಪಯುಕ್ತವಾಗಿಲ್ಲ. ಪೆಸಿಫಿಕ್ ಸಾಗರವನ್ನು ಸೇರುವ ನದಿಗಳಲ್ಲಿ ಫಿಟ್ಸ್‍ರಾಯ್ ಮತ್ತು ಬರ್ಡೆಕಿನ್ ಮುಖ್ಯವಾದವು. ಇವುಗಳಲ್ಲಿ ಒಂದೊಂದಕ್ಕೂ 50,000 ಚ.ಮೈ.ಗೂ ಹೆಚ್ಚಿನ ಜಲಾನಯನ ಭೂಮಿ ಇದೆ. ಈಸ್ಟರ್ನ್ ಹೈಲ್ಯಾಂಡ್ಸಿನ ಬಳಿ ಗ್ರೇಟ್ ಡಿವೈಡ್ ಶ್ರೇಣಿಯ ಪಶ್ಚಿಮಕ್ಕಿರುವ ಭಾಗವೆಲ್ಲ ಆರ್ಟೀಸಿಯನ್ ತಗ್ಗುನೆಲ. ಪಶ್ಚಿಮಕ್ಕೆ ಹರಿಯುವ ನದಿಗಳು ಹೆಚ್ಚು ಉದ್ದವಾಗಿದ್ದರೂ ಅವುಗಳಲ್ಲಿ ವರ್ಷವೆಲ್ಲ ನೀರಿರುವುದಿಲ್ಲ.

ಟಾರೆಸ್ ಜನಸಂಧಿಯಲ್ಲಿರುವ ದ್ವೀಪಗಳೂ ಪೂರ್ವತೀರದಲ್ಲಿ ಹಬ್ಬಿರುವ ಗ್ರೇಟ್ ಬ್ಯಾರಿಯರ್ ರೀಫಿನ ದ್ವೀಪಗಳೂ ಕ್ವೀನ್ಸ್‍ಲೆಂಡ್ ರಾಜ್ಯಕ್ಕೆ ಸೇರಿವೆ.
ವಾಯುಗುಣ: ಕ್ವೀನ್ಸ್‍ಲೆಂಡಿನಲ್ಲಿ ಮೂರು ವಾಯುಗುಣ ಪ್ರದೇಶಗಳುಂಟು. ಕರಾವಳಿ ಪ್ರದೇಶದ ಉಷ್ಣತೆ ಏಕರೀತಿಯದು. ಗಾಳಿ ತೇವದಿಂದ ಕೂಡಿರುತ್ತದೆ. ಮಳೆ 40"-165". ಕೇನ್ರ್ಸ್ ಮತ್ತು ಕಾರ್ಡ್‍ವೆಲ್ ನಡುವಣ ಕರಾವಳಿ ಜಿಲ್ಲೆ ಇಡೀ ಆಸ್ಟ್ರೇಲಿಯದಲ್ಲೇ ಅತ್ಯಧಿಕ ಮಳೆ ಪ್ರದೇಶ. ಕರಾವಳಿಯ ನೆರೆಯ ಒಳನಾಡಿನಲ್ಲಿ ಉಷ್ಣತೆ ಇನ್ನೂ ಹೆಚ್ಚು ವ್ಯತ್ಯಾಸವಾಗುತ್ತದೆ. ಮಳೆ ಬಲು ಕಡಿಮೆ. ಪಶ್ಚಿಮ ಮತ್ತು ನೈಋತ್ಯ ಪ್ರದೇಶಗಳಲ್ಲಿ 10" ಗಿಂತ ಕಡಿಮೆ ಮಳೆ. ಕ್ವೀನ್ಸ್‍ಲೆಂಡಿನಲ್ಲಿ ಅಧಿಕ ಮಳೆಯಾಗುವುದು. ಬೇಸಗೆಯಲ್ಲಿ (ಡಿಸೆಂಬರ್-ಮಾರ್ಚ್).

ಸಸ್ಯಗಳು, ಪ್ರಾಣಿಗಳು: ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಮಳೆಗಾಡುಗಳುಂಟು. 60"ಗಿಂತ ಹೆಚ್ಚು ಮಳೆಯಾಗುವ ಪೂರ್ವ ಕರಾವಳಿಯಲ್ಲಿ ಇವು ಸಮೃದ್ಧವಾಗಿವೆ. ಪಶ್ಚಿಮಕ್ಕೆ ಹೋದಂತೆ ಎಲೆ ಉದುರುವ ಮರಗಳು ಕಾಣಸಿಗುತ್ತವೆ. 30" ಗಿಂತ ಕಡಿಮೆ ಮಳೆ ಬೀಳುವ ಪಶ್ಚಿಮ ನಾಡಿನಲ್ಲಿ ಅವೂ ಕಣ್ಮರೆಯಾಗುತ್ತವೆ. ರಾಜ್ಯದ ಪಶ್ವಿಮದಂಚಿನ ಮರುಭೂಮಿಯ ಸನಿಯದಲ್ಲಿ ಕಾಣಬರುವುದು ವ್ಯಾಪಕವಾದ ಗೋಮಾಳ. ಪೂರ್ವದ ನದಿಗಳ ಅಳಿವೆಗಳ ಬಳಿಯೂ ಭರತದ ಮಣ್ಣಿನ ಪ್ರದೇಶಗಲ್ಲೂ-ಮುಖ್ಯವಾಗಿ ಉಷ್ಣವಲಯಕ್ಕೆ ಸೇರಿದ ಉತ್ತರಭಾಗದಲ್ಲಿ-ಗುಲ್ಮ ವೃಕ್ಷಗಳಿವೆ. ಕರಾವಳಿಯ ನೀಲಗಿರಿ ವೃಕ್ಷವೂ ಮಳೆಗಾಡಿನ ವೃಕ್ಷಗಳೂ ಚೌಬೀನೆಯ ದೃಷ್ಟಿಯಿಂದ ಉಪಯುಕ್ತವಾದಂಥವು.

ಕ್ವೀನ್ಸ್‍ಲೆಂಡಿನ ನೆಲಜೀವಿ ಸಸ್ತನಿಗಳಲ್ಲಿ ಕಾಂಗರೂವಿನಿಂದ ಪ್ರಾಣಿಗಳಿವೆ. ವಿನಾಶಕಾರಿ ಮಾಂಸಾಹಾರಿ ಪ್ರಾಣಿಗಳಿವೆ. ವಿನಾಶಕಾರಿ ಮಾಂಸಾಹಾರಿ ಪ್ರಾಣಿಗಳು ಕಡಿಮೆ. ಸ್ಥಳೀಯ `ಬೆಕ್ಕು ಗಳೇ ದೊಡ್ಡವು. ಓಪಾಸಂ, ಹೆಗ್ಗಣ, ಡಿಂಗೋ, ಬಾವಲಿಗಳು ಮತ್ತು ದಂಶಕಗಳು ಇತರ ಕೆಲವು ಪ್ರಾಣಿಗಳು. ಉತ್ತರ ಕ್ವೀನ್ಸ್‍ಲೆಂಡಿನಲ್ಲಿ 12ಳಿ ಉದ್ದದ ಹೆಬ್ಬಾವುಗಳುಂಟು. ಹಲ್ಲಿಗಳು ಸಾಮಾನ್ಯವಾಗಿ. ಈಮ್ಯೂ, ಕ್ಯಾಸೊವೆರಿ, ದಿವ್ಯಪಕ್ಷಿಗಳು ಮತ್ತು ಕುಂಜ ಪಕ್ಷಿಗಳು ಹೇರಳವಾಗುಂಟು. ಸಮುದ್ರದ ಮೀನುಗಳ ಪ್ರಭೇದಗಳೂ ಹಲವಾರು. ಗ್ರೇಟ್ ಬ್ಯಾರಿಯಲ್ ರೀಫಿನ ಕಡಲ ಜೀವಿಗಳು ವೈವಿಧ್ಯಮಯವಾಗಿವೆ. ಮಕರ ಸಂಕ್ರಾಂತಿ ಶಾಸ್ತ್ರ ಸಂಶೋಧನ ಕೇಂದ್ರ ಸ್ಥಾಪಿತವಾಗಿದೆ. ಕ್ವೀನ್ಸ್‍ಲೆಂಡಿನ ವಿಶಿಷ್ಟ ಸಸ್ಯಗಳೂ ಪ್ರಾಣಿಗಳೂ ನಾಶವಾಗದಂತೆ ಅವನ್ನು ರಕ್ಷಿಸುವ ಸಲುವಾಗಿ 1,00,100 ಎಕರೆಗಳ ವನಗಳನ್ನು ಕಾಯ್ದಿರಿಸಲಾಗಿದೆ. ಇವುಗಳ ಪೈಕಿ 66,480 ಎಕರೆಗಳ ಕಾರ್ನಾರ್‍ವಾನ್ ರಾಷ್ಟ್ರೀಯ ವನ ಒಂದು ವಿಶಾಲ ಪರ್ವತ ಪ್ರದೇಶವನ್ನು ಆವರಿಸಿದೆ.	

ಶಿಕ್ಷಣ: 1875-1964ರ ಶಿಕ್ಷಣ ಕಾನೂನಿನ ಪ್ರಕಾರ 15 ವರ್ಷಗಳ ವರೆಗೆ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ. ಕ್ವೀನ್ಸ್‍ಲೆಂಡ್ ವಿಶ್ವವಿದ್ಯಾಲಯ 1909ರಲ್ಲಿ ಸ್ಥಾಪಿತವಾಯಿತು. ಇದು ಈಗ ಸೇಂಟ್ ಲೂಸಿಯದಲ್ಲಿದೆ.
ಆರ್ಥಿಕತೆ: ಕ್ವೀನ್ಸ್‍ಲೆಂಡಿನಲ್ಲಿ ಹೇರಳವಾಗಿ ದನ, ಕುರಿಗಳನ್ನು ಸಾಕಲು ಅನುಕೂಲವಿದೆ. 1960ರ ದಶಕದ ಆದಿಭಾಗದಲ್ಲಿ ಇಲ್ಲಿ 2,25,00,000 ಕುರಿಗಳೂ 60,00,000 ದನಗಳೂ ಇದ್ದುವು. ಆಸ್ಟ್ರೇಲಿಯದಲ್ಲಿ ಉತ್ಪಾದನೆಯಾಗುವ ಮಾಂಸದಲ್ಲಿ ಳಿ ಭಾಗವನ್ನು ಕ್ವೀನ್ಸ್‍ಲೆಂಡ್ ಉತ್ಪಾದಿಸುತ್ತದೆ. ಬ್ರಿಸ್ಟೇನ್, ಗ್ಲಾಡ್‍ಸ್ಟನ್, ರಾಕ್‍ಹ್ಯಾಂಪ್ಪನ್, ಬೊವೆನ್, ಟೌನ್ಸ್‍ವಿಲ್ ಮತ್ತು ಕೇನ್ರ್ಸ್ ಮಾಂಸನಿರ್ಯಾತ ಕೇಂದ್ರಗಳು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಹಾಲು ಮತ್ತು ಹೈನ ಉತ್ಪಾದನೆ ಹೆಚ್ಚು.
1900ರ ದಶಕದ ಆದಿಕಾಲದಲ್ಲಿ 50,00,000 ಎಕರೆ ಭೂಮಿ ಬೆಳೆಗಳಿಗೆ ಮೀಸಲಾಗಿತ್ತು. ಕರಾವಳಿಯಲ್ಲಿ ಕಬ್ಬು ಮುಖ್ಯ ಬೆಳೆ, ಆಸ್ಟ್ರೇಲಿಯದ ಒಟ್ಟು ಕಚ್ಚಾ ಸಕ್ಕರೆ ಉತ್ಪಾದನೆಯಲ್ಲಿ ಶೇ.95 ರಷ್ಟನ್ನು ಈ ರಾಜ್ಯ ಉತ್ಪಾದಿಸುತ್ತದೆ. ಮೆಕ್ಕೆಜೋಳ, ಗೋಧಿ, ಪೀನೆಟ್ಸ್, ಹತ್ತಿ ಮತ್ತು ಹೊಗೆಸೊಪ್ಪು ಇತರ ಮುಖ್ಯ ಬೆಳೆಗಳು. ಪೈನಾಪಲ್, ಬಾಳೆ, ಕಿತ್ತಳೆ ಜಾತಿಯ ಹಣ್ಣುಗಳು, ಸೇಬು ಮತ್ತು ದ್ರಾಕ್ಷಿಗಳನ್ನೂ ಬೆಳೆಯುತ್ತಾರೆ. ಟೊಮಾಟೊ, ಆಲೂಗೆಡ್ಡೆ, ಕುಂಬಳಕಾಯಿ ಮುಖ್ಯ ತರಕಾರಿಗಳು.

ಕ್ವೀನ್ಸ್‍ಲೆಂಡಿನ ಮುಖ್ಯ ಖನಿಜಗಳಲ್ಲಿ ಕಲ್ಲಿದ್ದಲು ಒಂದು. ಇದು ಇಪ್ಸ್‍ವಿಚ್, ಬೊವೆನ್, ಕ್ಲೆರ್‍ಮಾಂಟ್ ಮತ್ತು ಮೇರಿಬರಗಳಲ್ಲಿ ಸಿಗುತ್ತದೆ. ಮೌಂಟ್ ಮಾರ್ಗನ್, ಕ್ರಾಕೌ, ಮೌಂಟ್ ಕೂಲಾನ್ ಮತ್ತು ಚಾರ್ಟರ್ಸ್ ಟವರ್ಸ್‍ಗಳಲ್ಲಿ ಚಿನ್ನ ತೆಗೆಯುತ್ತಾರೆ. ಇತರ ಖನಿಜಗಳು ಇವು: ಬೆಳ್ಳಿ (ಹರ್ಬರ್ಟನ್ ಮತ್ತು ಕ್ಲಾನ್‍ಕರಿ), ತಾಮ್ರ (ಕ್ಲನ್‍ಕರಿ ಮತ್ತು ಮೌಂಟ್ ಮಾರ್ಗನ್), ಸತು (ಹರ್ಬರ್ಟನ್), ಸೀಸ ಮತ್ತು ತವರ (ಮೌಂಟ್ ಈಸ).

ಎರಡನೆಯ ಮಹಾಯುದ್ಧದ ಅನಂತರ ಈ ರಾಜ್ಯ ಕೈಗಾರಿಕೆಯಲ್ಲಿ ಬಹಳ ಮುಂದುವರಿದಿದೆ. 1945ರ ಸುಮಾರಿನಲ್ಲಿ ಅಲ್ಲಿ 3,000 ಕಾರ್ಖಾನೆಗಳಿದ್ದುವು. 1960ರಲ್ಲಿ ಇವುಗಳ ಸಂಖ್ಯೆ 6,000ಕ್ಕೆ ಏರಿತು. ರಾಜ್ಯದ ಒಟ್ಟು ಉತ್ಪಾದನೆಯ ಅರ್ಧಭಾಗ ಬ್ರಿಸ್ಬೇನ್‍ನಲ್ಲಿ ಆಗುತ್ತದೆ. ಯಂತ್ರ, ಹಡಗು, ಮೋಟಾರು, ನೂಲು, ಟೈಲು, ರೈಲುಗಾಡಿ, ಸಕ್ಕರೆ ಇಲ್ಲಿಯ ಮುಖ್ಯ ಉತ್ಪನ್ನಗಳು. ಇಪ್ಸ್‍ವಿಚ್, ಮೇರಿಬರ, ರಾಕ್‍ಹ್ಯಾಂಪ್ಟನ್ ಮತ್ತು ಟೌನ್ಸ್ ವಿಲೆ ಇತರ ಕೈಗಾರಿಕಾ ಕೇಂದ್ರಗಳು.

ಉಣ್ಣೆ, ಸಕ್ಕರೆ, ದನದ ಮಾಂಸ, ಟಿಟಾನಿಯಂ, ಸೀಸ, ತಾಮ್ರ ಮತ್ತು ಬೆಣ್ಣೆ ಇಲ್ಲಿಯ ಮುಖ್ಯ ರಫ್ತುಗಳು. ಮೋಟಾರು ಯಂತ್ರದ ಬಿಡಿಭಾಗಗಳು, ಕಬ್ಬಿಣದ ಸಾಮಾನು, ತೈಲ ಮುಖ್ಯ ಆಮದುಗಳು.

ಈ ರಾಜ್ಯದಲ್ಲಿ 6,567 ಮೈಲಿಗಳಷ್ಟು ರೈಲುಮಾರ್ಗವಿದೆ. ಅಂತರರಾಜ್ಯ ಮತ್ತು ವಿದೇಶಿ ವಿಮಾನಮಾರ್ಗ ವ್ಯವಸ್ಥೆಗಳೂ ಉಂಟು. ಬ್ರಿಸ್ಬೇನ್, ರಾಕ್ ಹ್ಯಾಂಪ್ಟನ್, ಗ್ಲಾಡ್‍ಸ್ಟನ್, ಮಕೈ ಮತ್ತು ಕೇನ್ರ್ಸ್ ಮುಖ್ಯ ಬಂದರುಗಳು. 		(ಎಂ.ಎ.ಎಚ್.)